ಇಗ್ವಾನೊಡಾನ್-
ಜುರಾಸಿಕ್ ಮತ್ತು ಕ್ರಿಟೇಷಿಯಸ್ ಕಲ್ಪದಲ್ಲಿ (65-135 ದಶಲಕ್ಷ ವರ್ಷಗಳಷ್ಟು ಹಿಂದಿನ ಕಾಲ) ಬದುಕಿದ್ದ ಒಂದು ಹಲ್ಲಿ. ಇದು ಈಗ ಜೀವಿಸಿರುವ ಇಗ್ವಾನ (ನೋಡಿ- ಇಗ್ವಾನ-(ಕಡಲಗೌಳಿ)) ಹಲ್ಲಿಯನ್ನು ಬಲುಮಟ್ಟಿಗೆ ಹೋಲುತ್ತಿತ್ತು. ಡೈನೋಸಾರುಗಳ ಜಾತಿಯಲ್ಲಿ ಇಗ್ವಾನೋಡಾನ್ ಒಂದು. ಎತ್ತರ ಸುಮಾರು 15. ಬಲಯುತವಾದ ಬಾಲವಿದ್ದು ಹಿಂಗಾಲುಗಳನ್ನು ಹೊಂದಿದ್ದ ಈ ಪ್ರಾಣಿಯ ನಿಲುವು ಒಂದು ದೊಡ್ಡ ಕಾಂಗರೂವಿನ ಹಾಗೆ. ತನ್ನ ಮುಂಗಾಲುಗಳನ್ನು ಆಗಾಗ ಮಾತ್ರ ನೆಲಕ್ಕೆ ಮುಟ್ಟಿಸುತ್ತಿತ್ತು. ಇದು ಸ್ವಭಾವತಃ ಸಸ್ಯಾಹಾರಿ. ಇದರ ಮುಂಗಾಲಿನಲ್ಲಿ 5 ಬೆರಳುಗಳು. ಹೆಬ್ಬೆಟ್ಟಿನಲ್ಲಿ 1 ಉದ್ದದ ಉಗುರು. ಹಿಂಗಾಲಿನಲ್ಲಿ 4 ಬೆರಳುಗಳು. ಪ್ರಾಣಿಯ ಉದ್ದ ಸುಮಾರು 80. ಇಗ್ವಾನೊಡಾನ್ ಪ್ರಾಣಿಗಳಂಥ ಡೈನೋಸಾರುಗಳಿಂದ ಮುಂದುವರಿದು ಪಕ್ಷಿಗಳ ಉಗಮಕ್ಕೆ ಹಾದಿ ಮಾಡಿಕೊಟ್ಟಿರಬಹುದು. ಸೊಂಟದ ಮೂಳೆ ನಾಲ್ಕು ಚಾಚುಗಳನ್ನು ಹೊಂದಿದ್ದು ಸಮತೋಲನಕ್ಕೂ, ಕೂಡುವುದಕ್ಕೂ ಬಹಳ ಸಹಾಯಕವಾಗಿತ್ತು. ಈ ಪ್ರಾಣಿಯ 29 ಪೂರ್ತ ಪಳೆಯುಳಿಕೆಗಳು ಬ್ರಸೆಲ್ಸ್‍ನ ಒಂದು ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿವೆ. ಪ್ರಾಯಶಃ ಗತಕಾಲದಲ್ಲಿ ಪ್ರಚಂಡ ನೀರಿನ ಸುಳಿಗೆ ಸಿಕ್ಕಿ ಸಾಮೂಹಿಕವಾಗಿ ಸತ್ತಿರಬಹುದು.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ